ಮಧುಗಿರಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ , ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಮಾರ್ಚ್ 14 ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ , ಪ್ರಪ್ರಥಮ ಬಾರಿಗೆ ಹೃದ್ರೋಗ ತಪಾಸಣಾ ಶಿಬಿರ ಹಾಗೂ ಶ್ರವಣ ದೋಷವುಳ್ಳ ಆಯ್ದ ಕಡು ಬಡವರಿಗೆ ಉಚಿತವಾಗಿ ಶ್ರವಣ ಸಾಧನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಜಪಾನಂದಾ ಮಹರಾಜ್ ಸ್ವಾಮೀಜಿ ತಿಳಿಸಿದರು.
ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಈ ಶಿಬಿರದಲ್ಲಿ ಡಯಾಲಿಸಿಸ್ , ಹೃದ್ರೋಗ, ನೇತ್ರ ,ಚರ್ಮ ,ಮಧುಮೇಹ, ವಾಕ್ ಮತ್ತು ಶ್ರವಣ ದೋಷ, ಕಿವಿ, ಮೂಗು ,ಗಂಟಲು, ವಿಭಾಗದ ತಜ್ಞ ವೈದ್ಯರುಗಳು ಭಾಗವಹಿಸಲಿದ್ದಾರೆ. ಮಧುಗಿರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ನುರಿತ ತಜ್ಞ ವೈದ್ಯರುಗಳ ಮಾರ್ಗದರ್ಶನ ಹಾಗೂ ಸೂಕ್ತ ಔಷಧೋಪಚಾರ ಪಡೆದುಕೊಳ್ಳಬಹುದು ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ, ಸಿದ್ಧಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ ಕೇಂದ್ರದ ಅನುರಾಧ, ವೈದ್ಯ ಎಚ್.ವಿ. ನಟರಾಜ್ , ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು ಇದ್ದರು.

