ಮಧುಗಿರಿ: ಪಟ್ಟಣದ ದಂಡಿನ ಮಾರಮ್ಮ ದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಬುಧವಾರ ಮಧ್ಯರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬುಧವಾರ ಸಂಜೆಯಿಂದಲೇ ರಾಜ್ಯ ಹಾಗೂ ಸೀಮಾಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದಂಡಿನ ಮಾರಮ್ಮ ದೇವಾಲಯ ಮುಂಭಾಗ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಬುಧವಾರ ಮಧ್ಯರಾತ್ರಿ ದೇವಾಲಯದಿಂದ ದಂಡಿನ ಮಾರಮ್ಮ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಬೆಳ್ಳಿ ಪಲ್ಲಕ್ಕಿ ಮೇಲೆ ಪ್ರತಿಷ್ಠಾಪಿಸಲಾಯಿತು. ಬೆಳ್ಳಿ ಪಲ್ಲಕ್ಕಿಗೆ ಹೂವು, ಪುರಿ ಮತ್ತು ಬಾಳೆಹಣ್ಣು ಅರ್ಪಿಸಿ ಹರಕೆ ತೀರಿಸಿದರು.

ಬೆಳ್ಳಿ ಪಲ್ಲಕ್ಕಿ ಉತ್ಸವ ಆರಂಭವಾದಾಗ ಜಾತ್ರೆಯ ಆವರಣದಲ್ಲಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಸಿಡಿಮದ್ದಿನ ಪ್ರದರ್ಶನ ವೀಕ್ಷಿಸಲು ದೇವಾಲಯದ ಆವರಣದ ಸುತ್ತಲೂ ಸಾವಿರಾರು ಮಂದಿ ಜಮಾಯಿಸಿ ಸಂಭ್ರಮಿಸಿದರು.
ಮಧ್ಯ ರಾತ್ರಿ ಜಾತ್ರೆಯಲ್ಲಿ ಉತ್ಸಾಹದಿಂದ ಓಡಾಡಿದ ಜನರು ಬೆಳ್ಳಿ ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ಣುಂಬಿಕೊಂಡರು. ಬೇಸಿಗೆಯ ಧಗೆ ತಣಿಸಿಕೊಳ್ಳಲು ಕಲ್ಲಂಗಡಿ, ಐಸ್ಕ್ರೀಮ್, ಕಬ್ಬಿನ ಹಾಲು ಮತ್ತು ತಂಪು ಪಾನೀಯಗಳ ಮೊರೆ ಹೋದರು. ಜಾತ್ರೆಯಲ್ಲಿನ ಆಟೋಪಕರಣಗಳಲ್ಲಿ ಕುಳಿತು ಸಂಭ್ರಮಸಿದರು.
ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದಾನಿಗಳು ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು.
ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳ ರೈತರಿಗೆ ಬಹುಮಾನ ವಿತರಿಸಲಾಯಿತು.ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.
ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್,, ಡಿವೈಎಸ್ಪಿ ಮಂಜುನಾಥ್, , ಸಿಪಿಐ ಹನುಮಂತರಾಯಪ್ಪ, ಮುಖಂಡರಾದ ಎಂ.ಜಿ. ಶ್ರೀನಿವಾಸ್ ಮೂರ್ತಿ, ಪ್ರಧಾನ ಅರ್ಚಕ ಅರುಣ್ ಇದ್ದರು.

