ಮಧುಗಿರಿ : ಮನಷ್ಯನಿಗೆ ಮೂಲಭೂತ ಅಗತ್ಯತೆಯ ಜೊತೆಗೆ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರಕಿದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಡಯಾಲಿಸಿಸ್ ಕೇಂದ್ರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಗಾಳಿ , ನೀರು , ಆಹಾರ , ವಸತಿ ದೊರಕಿದಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದರು.
ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸರ್ಕಾರವೇ ಎಲ್ಲವನ್ನೂ ಒದಗಿಸಲು ಸಾದ್ಯವಿಲ್ಲ. ಉಳ್ಳವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮವಾದ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.
ಮನೆಯ ಹಿರಿಯರ ಸವಿ ನೆನಪಿನಲ್ಲಿ ಸೇವಾ ಸಂಸ್ಥೆ ಪ್ರಾರಂಭಿಸಿರುವುದು ಶ್ಲಾಘನೀಯ. ಸಮಾಜ ಸೇವೆಯೇ ದೈವ ಸೇವೆ. ಸಮಾಜ ಸೇವೆಯೇ ಧರ್ಮ. ಬಿದ್ದವರನ್ನು ಮೇಲೆತ್ತುವುದೇ ನಿಜವಾದ ಧರ್ಮ. ನಾವು ಎಷ್ಟೇ ಕೇಂದ್ರಗಳನ್ನು ತೆರೆದರೂ ಜನರಲ್ಲಿ ಬದಲಾವಣೆ ಕಂಡು ಬರದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಸಕ್ಕರೆ ಬಳಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದು, ಇದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಾತ್ವಿಕ ಆಹಾರಕ್ಕೆ ಹೆಚ್ವು ಪ್ರಾದಾನ್ಯತೆ ನೀಡಬೇಕು. ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ವರ್ಷಕ್ಕೆ ಎರಡು ಬಾರಿ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಈ ಭಾಗದಲ್ಲಿ ಸಿದ್ದಗಂಗಾ ಆಸ್ಪತ್ರೆ ಜೊತೆಗೆ ಪಾವಗಡ ಶಾರದಾದೇವಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಧುಗಿರಿಯಲ್ಲಿ ಡಯಾಲಿಸೀಸ್ ಕೇಂದ್ರ ಆರಂಬಿಸಿದ್ದು, ಇಂತಹ ಸೇವೆಯಲ್ಲಿ ನಿರತರಾಗಿರುವ ಜಪಾನಂದ ಸ್ವಾಮೀಜಿಯವರ ಸೇವೆ ಶ್ಲಾಘನೀಯ ಎಂದರು.
ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಮಾಹಾರಾಜ್ ಸ್ವಾಮೀಜಿ ಮಾತನಾಡಿ, ಮಧುಗಿರಿ, ಶಿರಾ, ಪಾವಗಡ ಕೊರಟಗೆರೆ ಭಾಗದ ಜನರಿಗೆ ಅನುಕೂಲವಾಗಲು ಡಯಾಲಿಸೀಸ್ ಮತ್ತು ಕಣ್ಣಿನ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದ್ದು, ಸಿದ್ದಗಂಗಾ ಶ್ರೀಗಳು ಮತ್ತು ಸಿದ್ದಗಂಗಾ ವೈದ್ಯಕೀಯ ಕಾಲೇಜು ಹಾಗೂ ದಾನಿಗಳ ಸಹಕಾರದಿಂದ ಈ ಆಸ್ಪತ್ರೆ ನಡೆಸಲಾಗುತ್ತಿದೆ. ಸಿದ್ದಗಂಗಾ ಮಠದ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೇ ಸುಸೂತ್ರವಾಗಿ ಆಸ್ಪತ್ರೆ ನಡೆಸಲಾಗುತ್ತಿದೆ. ಜೀವನದಲ್ಲಿ ಶಿವನನ್ನು ಕಂಡು ಸೇವೆ ಮಾಡಲಾಗುತ್ತಿದೆ. ಪಾವಗಡ , ಮಧುಗಿರಿಯ ಲ್ಲಿ ಸೇವಾ ಯಜ್ಞ ನಡೆಯುತ್ತಿದೆ ಎಂದರು.
ಸಿದ್ದಗಂಗಾ ಆಸ್ಪತ್ರೆಯ ಕಾರ್ಯ ನಿರ್ವಹಣಾ ನಿರ್ದೇಶಕ ಡಾ. ಎಸ್. ಸಚ್ಚಿದಾನಂದ , ಪ್ರಾಂಶುಪಾಲ ಡಾ. ಶಾಲಿನಿ, ಡಾ. ಅರುಣ್, ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ. ಎನ್. ಸಂಜೀವ್ ಕುಮಾರ್, ಡಾ. ಸ್ವಾತಿ, ದಾನಿಗಳಾದ ಹೆಚ್. ಬಿ. ಶಿವಕುಮಾರ್, ಎನ್ಎಂ ಶಿವಕುಮಾರ್, ಹೆಚ್.ವಿ. ವೀರೇಶ್, ಎಚ್ ಬಿ ರುದ್ರೇಶ್, ಅನುರಾಧಾ, ಉಮಾ ಶಂಕರ್, ಅಕ್ಷಯ್, ಎಂ.ಎಸ್. ಶಂಕರ್ ನಾರಾಯಣ, ಎಂಜಿ ಶ್ರೀನಿವಾಸಮೂರ್ತಿ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಶಿಕ್ಷಕ ಶಶಿಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಆನಂದ್, ಪುರಸಭಾ ಮುಖ್ಯಾಧಿಕಾರಿ ಸುರೇಶ್ ಇದ್ದರು.

