ಮಧುಗಿರಿ : ತಾಲ್ಲೂಕಿನ ಐ.ಡಿ.ಹೋಬಳಿಗೆ ಏಪ್ರಿಲ್ 3 ರಂದು ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆವಾರು ಅಭಿವೃದ್ಧಿ ಕಾಮಗಾರಿಗಳು , ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಿಕೊಂಡು ಮಾಹಿತಿಯನ್ನು ನಿಮ್ಮ ಮೇಲಾಧಿಕಾರಿಗಳಿಗೆ ಶೀಘ್ರವಾಗಿ ನೀಡಬೇಕು ಹಾಗೂ ಸಕಲ ಸಿದ್ದತೆಯನ್ನು ತಯಾರಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಆಯಾ ಇಲಾಖೆವಾರು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಬೇಕೆಂದು ತಿಳಿಸಿದರು.

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಈ ಬಗ್ಗೆ ಪಿಡಿಒಗಳು ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಹಾಗೂ ತಕ್ಷಣ ಸ್ಪಂದಿಸುವಂತಹ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು.
ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಪಶುಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ , ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್ , ತಾ.ಪಂ ಇ.ಓ ಲಕ್ಷಣ್ , ಡಿವೈಎಸ್ ಪಿ ಮಂಜುನಾಥ್ , ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋನಿಯಾ ವಾರ್ಣೇಕರ್ , ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಲಾಲಾಪೇಟ ಮಂಜುನಾಥ್ , ಸಿಪಿಐ ಹನುಮಂತರಾಯಪ್ಪ , ತಾ.ಪಂ.ಎಡಿಒ ಧನಂಜಯ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

