ಮಧುಗಿರಿ : ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದರು. ತಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದು ವೃದ್ದರು , ಮಹಿಳೆಯರು ಹಾಗೂ ರೈತರು ಅರ್ಜಿಗಳನ್ನು ಹಿಡಿದುಕೊಂಡು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಕೆಲವರಂತು ಗಳಗಳನೇ ಕಣ್ಣೀರು ಸುರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಿದರು. ಕಣ್ಣೀರು ಹಾಕಿದ ವ್ಯಕ್ತಿಗಳನ್ನು ಕಂಡು ದೊಡ್ಡೇರಿ ಹಾಗೂ ಕೊಡಿಗೇನಹಳ್ಳಿ ಕಂದಾಯ ನೀರಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಕಂದಾಯ ನೀರಿಕ್ಷಕ ಹಾಗೂ ಕಾರ್ಯದರ್ಶಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಾಗುವಳಿ ಚೀಟಿ ನೀಡಿರುವವರಿಗೆ ಖಾತೆ ಮತ್ತು ಪಹಣಿ , ಪೌತಿ ಖಾತೆ , ಪೋಡು , ಪಹಣಿ ತಿದ್ದುಪಡಿ ,ಬಿಪಿಎಲ್ ಕಾರ್ಡ್ ,ನಿವೇಶನ , ಜಮೀನಿಗೆ ತೆರಳಲು ದಾರಿ ಸೇರಿದಂತೆ 331 ಅರ್ಜಿಗಳು ಬಂದವು. ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಇತ್ಯರ್ಥ ಮಾಡಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಖಾತೆ ಆಂದೋಲ ಪ್ರಾರಂಭ ಮಾಡಿ ರೈತರ ಮನೆ ಬಾಗಿಲಿಗೆ ಖಾತೆ ಮತ್ತು ಪೌತಿ ಖಾತೆಯನ್ನು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ತಾಲ್ಲೂಕು ದೊಡ್ಡೇರಿ ಹಾಗೂ ಐ.ಡಿ.ಹಳ್ಳಿ ಹೋಬಳಿಯಿಂದ ಖಾತೆ ಮತ್ತು ಪೌತಿ ಖಾತೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬಂದಿದ್ದು, ಶೀಘ್ರವಾಗಿ ಇತ್ಯರ್ಥ ಮಾಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಅತಿ ಜರೂರಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಆಹಾರ , ಆಧಾರ್ ಹಾಗೂ ಪಿಂಚಣಿ ಅದಾಲತ್ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು. ತಾಲ್ಲೂಕಿನ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ , ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ತಾಲ್ಲೂಕಿನ ಬಡವರಿಗೆ 2500 ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲು ಈಗಾಗಲೇ ತಾಲ್ಲೂಕು ಅಡಳಿತ ಸಿದ್ದತೆ ಮಾಡಿಕೊಳ್ಳಲಾಗಿದೆ. ಶೀಘ್ರವಾಗಿ ವಿತರಣೆ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಈಗಾಗಲೇ 60 ಸಾವಿರ ಪೌತಿ ಖಾತೆಯನ್ನು ಮಾಡಲಾಗಿದೆ ಎಂದರು.
ಈ ಹಿಂದೆ ತುಮಕೂರು – ರಾಯದುರ್ಗ ರೈಲ್ವೆಯ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ವಿಳಂಭವಾಗಿದ್ದರಿಂದ ರೈಲ್ವೆ ಯೋಜನೆ ತಡವಾಯಿತು. ಈಗ ಆ ಸಮಸ್ಯೆಗಳು ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈಗಾಗಲೇ ರೈಲ್ವೆ ಯೋಜನೆಯ ಕಾಮಗಾರಿ ಟೆಂಡರ್ ಕೂಡ ಆಗಿದೆ. ಶೀಘ್ರವಾಗಿ ಮಧುಗಿರಿ , ಕೊರಟಗೆರೆ ತಾಲ್ಲೂಕಿನಲ್ಲಿ ರೈಲ್ವೆ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳವನ್ನು ಗುರುತು ಮಾಡುವಂತೆ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ ಅವರಿಗೆ ಸೂಚಿಸಿದರು. ಸ್ಥಳ ದೊರೆತರೆ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಣ್, ಸಿಪಿಐ ಹನುಮಂತರಾಯಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

