ಮಧುಗಿರಿ : ಇಲ್ಲಿನ ಪುರಸಭೆ 2026–27ನೇ ಸಾಲಿನ ಬಜೆಟ್ ನ್ನು ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಗೊಟೂರು ಶಿವಪ್ಪ ಗುರುವಾರ ಮಂಡಿಸಿದರು.
ಒಟ್ಟು ₹33.45 ಕೋಟಿ ಆದಾಯ ಹಾಗೂ ₹32.92 ಕೋಟಿ ವೆಚ್ಚ ಅಂದಾಜು ಮಾಡಲಾಗಿದ್ದು, ₹52.36 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆಯ ಪ್ರಮುಖ ಆದಾಯ ಮೂಲಗಳಲ್ಲಿ ಸ್ವತ್ತಿನ ತೆರಿಗೆ, ನೀರು ಶುಲ್ಕ, ವ್ಯಾಪಾರ ಪರವಾನಗಿ ಹಾಗೂ ಕಟ್ಟಡ ಅನುಮತಿ ಶುಲ್ಕಗಳು ಸೇರಿವೆ. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳ ಮೇಲೂ ಅವಲಂಬನೆ ಮುಂದುವರೆದಿದೆ.
ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆರೋಗ್ಯ, ಸ್ವಚ್ಛತೆ, ಕಸದ ನಿರ್ವಹಣೆ ಹಾಗೂ ಪೌರ ಕಾರ್ಮಿಕರ ವೇತನಕ್ಕೂ ಅನುದಾನ ಮೀಸಲಾಗಿದೆ.
ಬಜೆಟ್ ಪೂರ್ವ ಸಾರ್ವಜನಿಕ ಅಭಿಪ್ರಾಯದ ಮೇರೆಗೆ ವಿದ್ಯುತ್ ಚಿತಾಗಾರ, “ಐ ಲವ್ ಮಧುಗಿರಿ” ಸೆಲ್ಫಿ ಪಾಯಿಂಟ್, ಪಾರ್ಕು ಅಭಿವೃದ್ಧಿ, ಅಂಗನವಾಡಿ ಮಕ್ಕಳಿಗೆ ಹಾಗೂ ಪತ್ರಕರ್ತರ ಕುಟುಂಬದ ಚಿಕಿತ್ಸೆ ವೆಚ್ಚ ಸೇರಿದಂತೆ ಹಲವು ಯೋಜನೆಗಳಿಗೆ ಹಣ ಮೀಸಲಿರಿಸಲಾಗಿದೆ.
ಮುಖ್ಯಾಧಿಕಾರಿ ಸುರೇಶ್, ಲೆಕ್ಕಾಧಿಕಾರಿ ಸಲ್ಮಾ, ಕಚೇರಿ ವ್ಯವಸ್ಥಾಪಕ ಗುರುಪ್ರಸಾದ್, ಇಂಜಿನಿಯರ್‌ಗಳಾದ ಪ್ರಶಾಂತ್, ಸಂಜೀವ್ ಮೂರ್ತಿ ಹಾಗೂ ಆರೋಗ್ಯ ನಿರೀಕ್ಷಕ ಬಾಲಾಜಿ ಇದ್ದರು.

