ಮಧುಗಿರಿ : ಪಟ್ಟಣದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಸವನಹಳ್ಳಿ ಬೈಪಾಸ್ ಬಳಿ ಇರುವ ಕೆ.ಎಸ್.ಆರ್.ಟಿ.ಸಿ ಡಿಪೋ ಪಕ್ಕದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ನೂತನ ವಿಬಾಗೀಯ ಕಚೇರಿಯ ಸ್ಥಳವನ್ನು ಶನಿವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಟ್ಟಣದಲ್ಲಿ ವಿಭಾಗೀಯ ಕಚೇರಿ ಪ್ರಾರಂಭಿಸಲು ಕೆ.ಎಸ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇದರ ಜೊತೆಗೆ ಈ ಭಾಗದಲ್ಲಿ ವರ್ಕ್ ಶಾಪ್, ಟೈರ್ ರೀಸೋಲಿಂಗ್ ಕೇಂದ್ರ ತೆರೆಯಲು ಚರ್ಚೆ ನಡೆಸಲಾಗಿದ್ದು, ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.
ಪಟ್ಟಣದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯ ಆರ್.ಡಿ.ಪಿ.ಆರ್ ಮತ್ತು ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ತಾತ್ಕಾಲಿಕವಾಗಿ ವಿಭಾಗೀಯ ಕಚೇರಿ ತೆರೆಯಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.
ಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಚೇರಿ ಮಂಜೂರು ಮಾಡಿಕೊಡಲು ಶ್ರಮಿಸಿದ ಸಚಿವ ರಾಮಲಿಂಗಾರೆಡ್ಡಿ ಹಾಗೂ ಎಂ.ಡಿ ಅಕ್ರಪಾಷಾ ರವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ಮುಖ್ಯ ಸಂಚಾರಿ ವ್ಯವಸ್ಥಾಪಕ ಆಂತೋನಿ ಜಾರ್ಜ್, ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಲಿಂಗರಾಜು, ಉಪ ಮುಖ್ಯ ಯಾಂತ್ರಿಕ ಅಭಿಯಂತರ ಲಕ್ಷ್ಮಣ್, ಮುಖ್ಯ ಕಾಮಗಾರಿ ಅಭಿಯಂತರ ಕೆ.ಎಚ್. ಹವಾಲ್ದಾರ್, ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಮಧುಗಿರಿ ಘಟಕ ವ್ಯವಸ್ಥಾಪಕ ಕಾಂತರಾಜು ಇದ್ದರು.

