ಮಧುಗಿರಿ : ತಾನು ಬದುಕುವ ಹಾದಿಯನ್ನು ನೋಡಿ ಮನುಕುಲವೇ ಮೆಚ್ಚುವಂತಿರಬೇಕು.ಮನುಕುಲದ ಮನಕ್ಕೆ ಮಸಿ ಬಳಿಯುವ ಜೀವನ ನಮ್ಮದಾಗಬಾರದು ಎಂದು ಟಿ.ವಿ.ವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಸಿ,ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕಾಳಿಕಾಂಬ ದೇವಿಗೆ ವಿಶ್ವ ಶಂಕರ ಫೌಂಡೇಶನ್ ವತಿಯಿಂದ 87 ನೇಯ ಬೆಳದಿಂಗಳ ಹುಣ್ಣಿಮೆಯ ಪೂಜಾ ಸತ್ಸಂಗದಲ್ಲಿ ಮಾತನಾಡಿದ ಅವರು, ಬಣ್ಣದ ಬದುಕಿನ ಚಿತ್ತಾರ ನೋಟಕ್ಕೆ ಮಾತ್ರ ಚೆಂದ. ಅನುಭವಿಸಲು ಚೆನ್ನಾಗಿರುವುದಿಲ್ಲ .ಕಷ್ಟಗಳ ಹೊಡೆತಕ್ಕೆ ಬಣ್ಣ ಕರಗಿಹೋಗುತ್ತದೆ. ಕಷ್ಟ ಕಾರ್ಪಣ್ಯಕ್ಕೆ ಕರಗದ ಜೀವನ ನಮ್ಮದಾಗಬೇಕು.ಹಾಗಾದರೆ ನಾವು ನಡೆಯುವ ದಾರಿ ಚೆನ್ನಾಗಿರಬೇಕಲ್ಲವೇ? ಅಂದ ಹಾಗೆ ನಮ್ಮ ಅಂತರಾಳದಲ್ಲಿ ಭಕ್ತಿಯ ಗಿಡ ಹುಟ್ಟಬೇಕು.ಭಕ್ತಿ ಪಂಜಿನ ಬೆಳಕಿನಂತೆ ನಮ್ಮ ಕೈ ಹಿಡಿದು ನಡೆಸುತ್ತದೆ.ಭಕ್ತಿಯ ಬೆಳಕು ಸೂರ್ಯನಷ್ಟೇ ಪ್ರಖರವಾಗಿರುತ್ತದೆ. ಭಕ್ತಿಯ ಗಿಡ ಚಿಗುರಿದವನ ಹೃದಯದಲ್ಲಿ ಶರೀರಮೋಹ ಕಾಣದು.ಅಹಂಕಾರ ಗೂಡು ಕಟ್ಟದು.ಉಸಿರಿನಲ್ಲಿ ಭಯವಿರದು .ಕಾಮನೆಗಳು ಕಾವಿತೊಡುತ್ತವೆ. ಚಿತ್ತ ನಿರಪೇಕ್ಷವಾಗುತ್ತದೆ.ಜ್ಙಾನ ಪರಮಾನಂದವನ್ನು ಅನುಭವಿಸುತ್ತದೆ.ಭಾವ ದಿಗಂಬರವನ್ನು ಅಪ್ಪಿಕೊಳ್ಳುತ್ತದೆ.ಒಟ್ಟಾರೆ ಬದುಕು ತೃಪ್ತಿಯ ತುಪ್ಪವಾಗುತ್ತದೆ. ತುಪ್ಪದ ಊಟ ಯಾರು ಬೇಕಾದರೂ ಉಣ್ಣಲಿ. ಭಕ್ತಿಯ ಹಾದಿ ಮನುಕುಲವನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವಶಂಕರ ಫೌಂಡೇಶನ್ ವತಿಯಿಂದ ಪ್ರೊ.ಸಿ.ಕೃಷ್ಣಪ್ಪ ಹಾಗೂ ಹಿರಿಯರಾದ ರಾಮಾಚಾರ್ ವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇವಾಕರ್ತರಾದ ಹಳೇಹಟ್ಟಿ ಗೋವಿಂದರಾಜು, ಕಮಲ ,
ಗುಣಶ್ರೀ, ಶ್ರೀನಿವಾಸ, ಪುರೋಹಿತ ದೊಡ್ಡೇರಿ ಸಾಯಿಪ್ರಕಾಶ್, ಈರಣ್ಣ, ಧನುಷ್,ರಮೇಶ,ಶ್ರೀನಿವಾಸ, ಶ್ರೀಧರ, ಶಶಾಂಕ್,ಡಾ ಅಮರಾವತಿ ದ್ರೇಹಾಚಾರ್ ಇದ್ದರು.

