ಮಧುಗಿರಿ : ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಾರಿಗೆ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿಸಲಾಗಿದೆ ಹಾಗೂ ಶೀಘ್ರವಾಗಿ ಪ್ರಾರಂಭ ಮಾಡಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ನಕುಲ್ ಪಾರ್ಟಿ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವತಿಯಿಂದ ಬುಧವಾರ ನೂತನವಾಗಿ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿಸಿದ ಹಿನ್ನಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2013 ರಲ್ಲಿ ನಾನು ಶಾಸಕನಾಗಿದ್ದಾಗ ಸಾರಿಗೆ ಸಂಸ್ಥೆಯ ಡಿಪೋ ಮಂಜೂರು ಮಾಡಿಸುವ ಸಂದರ್ಭದಲ್ಲಿ 2.20 ಎಕರೆ ಜಮೀನನ್ನು ವಿಭಾಗೀಯ ಕಚೇರಿಗಾಗಿ ಮೀಸಲು ಇಟ್ಟಿದ್ದರಿಂದ ಇಂದು ಜಾಗದ ಸಮಸ್ಯೆಯೇ ಇಲ್ಲದಂತಾಗಿದೆ ಎಂದರು. ಸಾರಿಗೆ ವಿಭಾಗೀಯ ಕಚೇರಿಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಿಗೆ ಬಸ್ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಈ ಹಿಂದೆ ಬಸ್ ಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲಾ – ಕಾಲೇಜುಗಳಿಗೆ ಕಳುಹಿಸುತ್ತಿರಲಿಲ್ಲ. ಆದರೆ ಈಗ ಬಸ್ ಸೌಕರ್ಯ ಹಾಗೂ ನೌಕರರ ಸಹಕಾರದಿಂದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಧುಗಿರಿಯಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋವನ್ನು ಶೀಘ್ರವಾಗಿ ಮಂಜೂರು ಮಾಡಿಸಲು ಈಗಾಗಲೇ ಚಿಂತನೆ ನಡೆಸಿದ್ದೇನೆ ಹಾಗೂ ಈ ಡಿಪೋಗೂ ಜಾಗವನ್ನು ಮಂಜೂರು ಮಾಡಿಸಲಾಗುವುದು ಎಂದರು. ಮಧುಗಿರಿಯಲ್ಲಿ ಈಗಿರುವ ಸಾರಿಗೆ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.
ಸಾರಿಗೆ ನಿಗಮದ ನೌಕರರ ಸಮಸ್ಯೆಗಳ ಮನವಿ ಪತ್ರವನ್ನು ನೀಡಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಈ ಬಗ್ಗೆ ಸಾರಿಗೆ ಡಿಪೋ ವ್ಯವಸ್ಥಾಪಕರು ಗಮನ ಹರಿಸುವಂತೆ ಶಾಸಕರು ಸೂಚಿಸಿದರು.
ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಕಾಂತರಾಜು , ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ , ಸಾರಿಗೆ ಇಲಾಖೆಯ ಲೆಕ್ಕಪರಿಶೋಧಕ ಅನ್ನಪೂರ್ಣ, ಚಾಲಕರಾದ ನಾಗರಾಜು , ಲೋಕೇಶ್ , ಸೋಮಶೇಖರ್ ,ಜಗದೀಶ್ , ಅನಿಲ್ , ರಾಜಣ್ಣ , ಗೋವಿಂದರಾಜು, ಮೋಹನ್ , ನಾಗರಾಜು ಇದ್ದರು.

