ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಗ್ರಾಮದಲ್ಲಿ ಅವಮಾನೀಯ ಘಟನೆ ನಡೆದಿದ್ದು ಗ್ರಾಮಸ್ಥರಲ್ಲಿ ಕಳವಳ ಮೂಡಿಸಿದೆ.
ಗ್ರಾಮದ ನಿವಾಸಿಯಾದ ಆಶಾ ಅವರು ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದೊಡ್ಡಯ್ಯ ಹಾಗೂ ರಾಮಕೃಷ್ಣಯ್ಯ ಅವರು ನಮ್ಮ ಮನೆಯ ಗೇಟ್‌ಗೆ ಬೀಗ ಹಾಕಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಹಾಗೂ ನನ್ನ ಪತಿ ಹರೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೇಟ್‌ಗೆ ಬೀಗ ಹಾಕಿದ ಕಾರಣದಿಂದ ಮನೆಯೊಳಗೆ ಹಾಗೂ ಹೊರಗೆ ಹೋಗಲು ಕುಟುಂಬದವರು ಕಾಂಪೌಂಡ್ ಹಾರಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಸಮಸ್ಯೆಗಳಿದ್ದರೆ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಮನೆಯ ಗೇಟ್‌ಗೆ ಬೀಗ ಹಾಕಿ ತೊಂದರೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರತಿದಿನ ಕಾಂಪೌಂಡ್ ಹಾರಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿರುವುದರಿಂದ ತಕ್ಷಣ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

