ಮಧುಗಿರಿ : ಮಾನವ ಜೀವನದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೋಗದಿಂದ ಬಳಲುತ್ತಿರುವ ಜನರನ್ನು ಗುಣಪಡಿಸುವ ಮೂಲಕ ಅವರ ಜೀವನಕ್ಕೆ ಹೊಸ ಆಶೆಯನ್ನು ನೀಡುತ್ತಿದ್ದಾರೆ ಎಂದು ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಜಪಾನಂದಾ ಮಹರಾಜ್ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ , ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ , ಹೃದ್ರೋಗ ತಪಾಸಣಾ ಶಿಬಿರ ಹಾಗೂ ಶ್ರವಣ ದೋಷವುಳ್ಳ ಬಡವರಿಗೆ ಉಚಿತವಾಗಿ ಶ್ರವಣ ಸಾಧನವನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಆರೋಗ್ಯಕರ ಜೀವನ ನಿರ್ಮಾಣವಾಗಲು ವೈದ್ಯರ ಸೇವೆ ಅತ್ಯಗತ್ಯ. ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ವೈದ್ಯರು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಆರೋಗ್ಯ ಶಿಬಿರಗಳಿಂದ ಬಡವರು ಹಾಗೂ ರೋಗಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಆರೋಗ್ಯ ಶಿಬಿರದಲ್ಲಿ ಉತ್ತಮವಾದ ವೈದ್ಯರುಗಳು ಆಗಮಿಸುತ್ತಾರೆ. ಅವರಿಂದಲೇ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಸಲಹೆಗಳನ್ನು ಪಡೆಯಬೇಕೆಂದು ತಿಳಿಸಿದರು.
ಪಟ್ಟಣದ ಸಿದ್ದಗಂಗಾ ಡಯಾಲಿಸಿಸ್ ಕೇಂದ್ರದಲ್ಲಿ 1500 ಡಯಾಲಿಸಿಸ್ ಪೂರ್ಣಗೊಂಡಿರುವುದು ಸಂತಸ ತಂದಿದೆ. ಈ ಕೇಂದ್ರದಲ್ಲಿ ಕಣ್ಣಿನ ತಪಾಸಣೆ , ಚರ್ಮರೋಗ ತಪಾಸಣೆ ಹಾಗೂ ಡಯಾಲಿಸಿಸ್ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿ, ಮತ್ತಷ್ಟು ಸ್ಥಳ ದೊರೆತರೆ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ನಾನು ಬದ್ದನಾಗಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ, ಸಿದ್ಧಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ ಕೇಂದ್ರದ ಅನುರಾಧ, ಅಕ್ಷಯ್ , ಮಹಿಳಾ ಸಮಾಜದ ಗೌರವಾಧ್ಯಕ್ಷೆ ಪುಷ್ಪಾವತಮ್ಮ, ವೈದ್ಯರಾದ ಅರುಣ್, ಶರತ್ , ನಟರಾಜ್, ಶ್ರೀನಿವಾಸ್, ಸ್ವಾತಿ , ಅಭಿಷೇಕ, ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಎಂ.ಎನ್. ಸಂಜೀವ್ ಕುಮಾರ್ , ಇನ್ಫೋಸಿಸ್ ಮಹೇಶ್ , ಶಿಕ್ಷಕ ಶಶಿಕುಮಾರ್ ಇದ್ದರು.

