ಸಾರಿಗೆ ವಿಭಾಗೀಯ ಕಚೇರಿ ಮಂಜೂರು : ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ಜನರು

ಮಧುಗಿರಿ : ತಾಲ್ಲೂಕಿಗೆ ಬಹು ದಿನಗಳಿಂದಲೂ ನಿರೀಕ್ಷಿತವಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಾರಿಗೆ ವಿಭಾಗೀಯ ಕಚೇರಿ ಮಂಜೂರಾಗಿರುವುದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

2025 ಜುಲೈ 7 ರಂದು ಸಹಕಾರ ಸಚಿವರಾಗಿದ್ದ ಶಾಸಕ ಕೆ.ಎನ್.ರಾಜಣ್ಣ ಅವರು ಸಾರಿಗೆ ಸಚಿವರಿಗೆ ಮಧುಗಿರಿಗೆ ಸಾರಿಗೆ ವಿಭಾಗೀಯ ಕಚೇರಿ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು ಹಾಗೂ ಈ ಹಿಂದೆ ಮಧುಗಿರಿ ಎಆರ್ ಟಿ ಒ ಕಚೇರಿ ನೂತನ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಾಸಕ ಕೆ.ಎನ್.ರಾಜಣ್ಣ ಕೆಎಸ್‌ಆರ್‌ಟಿಸಿ ಸಾರಿಗೆ ವಿಭಾಗೀಯ ಕಚೇರಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಮನವಿಯಂತೆ ಕೆಎಸ್‌ಆರ್‌ಟಿಸಿ ಸಾರಿಗೆ ವಿಭಾಗೀಯ ಕಚೇರಿ ಮಂಜೂರು ಆಗಿರುವುದರಿಂದ ಪ್ರಯಾಣಿಕರು ಹಾಗೂ ಜನರು ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿಭಾಗೀಯ ಕಚೇರಿ ಸ್ಥಾಪನೆಯಿಂದ ಬಸ್‌ಗಳ ನಿರ್ವಹಣೆ, ವೇಳಾಪಟ್ಟಿ ವ್ಯವಸ್ಥೆ, ಸಿಬ್ಬಂದಿ ಆಡಳಿತ ಸೇರಿದಂತೆ ಹಲವು ಸೇವೆಗಳು ಸ್ಥಳೀಯ ಮಟ್ಟದಲ್ಲೇ ಸುಗಮವಾಗಿ ನಡೆಯಲಿವೆ. ಇದುವರೆಗೆ ಇಂತಹ ಸೇವೆಗಳಿಗಾಗಿ ದೂರದ ನಗರಗಳಿಗೆ ಅವಲಂಬಿಸಬೇಕಾಗಿದ್ದ ಪರಿಸ್ಥಿತಿ ಇತ್ತು.
ಹೊಸ ಕಚೇರಿ ಪ್ರಾರಂಭವಾದ ನಂತರ ಮಧುಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್‌ಸೌಲಭ್ಯ ದೊರಕುವ ನಿರೀಕ್ಷೆಯಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ತುಮಕೂರು ವಿಭಾಗವನ್ನು ವಿಭಜಿಸಿ ಕೊರಟಗೆರೆ ಮಧುಗಿರಿ , ಶಿರಾ , ಚಿತ್ರದುರ್ಗ ವಿಭಾಗದ ಪಾವಗಡ ಘಟಕವನ್ನು ಸೇರಿಸಿ ಮಧುಗಿರಿ ಕೆಎಸ್‌ಆರ್‌ಟಿಸಿ ಸಾರಿಗೆ ವಿಭಾಗೀಯ ಕಚೇರಿಯನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ನೂತನ ಸಾರಿಗೆ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿಸಿರುವ ಶಾಸಕ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರಿಗೆ ಪ್ರಯಾಣಿಕರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!